ಬೇತುಲ್ ಬೀಚ್: ಗೋವಾದ ಬೇತುಲ್‌ನ ಅರಬ್ಬಿ ಸಮುದ್ರದಲ್ಲಿ ಭಾಗಶಃ ಮುಳುಗುತ್ತಿದ್ದ ಮಂಗಳೂರಿನ ಪರ್ಸಿನ್ ಬೋಟ್ ಅನ್ನು ಬುಧವಾರ 6 ಮೀನುಗಾರಿಕಾ ದೋಣಿಗಳ ಸಹಾಯದಿಂದ ರಕ್ಷಿಸಲಾಗಿದೆ. ರಕ್ಷಿಸಿದ ದೋಣಿಯನ್ನು ಇಲ್ಲಿನ ಬೈತಕೋಳ ಮೀನುಗಾರಿಕಾ ಬಂದರಿಗೆ ತರಲಾಯಿತು. ಮಂಗಳೂರಿನ ಇಂದಾದ್ ಎಂಬುವರಿಗೆ ಸೇರಿದ ರಾಯಲ್ ಬ್ಲೂ ಹೆಸರಿನ ಈ ಪರ್ಸಿನ್ ಬೋಟ್ ಕಾರವಾರದಿಂದ ಸುಮಾರು 30 ನಾಟಿಕಲ್ ಮೈಲು ದೂರದಲ್ಲಿ ಸಿಲುಕಿತ್ತು. ಏಷ್ಯನ್ ಬ್ಲೂ, ಸೀ ಫ್ಲವರ್, ಸೀ ಪ್ರಿನ್ಸ್, ವೈಟ್ ಆರ್ಬಿಟ್, ಬ್ಲ್ಯಾಕ್ ಬೆರ್ರಿ, ಸೀ ಹಂಟರ್ ಹೆಸರಿನ ದೋಣಿಗಳ ಸಹಾಯದಿಂದ ರಕ್ಷಿಸಿ ಕೊನೆಗೆ ಬಂದರಿಗೆ ತರಲಾಯಿತು. ರಾಯಲ್ ಬ್ಲೂ ಬೋಟ್‌ನ ಕೆಳಭಾಗದಲ್ಲಿ ದೊಡ್ಡ ಬಿರುಕು ಕಾಣಿಸಿಕೊಂಡು ನೀರು ಪ್ರವೇಶಿಸಿತು. ಸುಮಾರು ಏಳು ಕಾರ್ಮಿಕರು ಅಪಾಯದಲ್ಲಿರುವ ಬಗ್ಗೆ ಸಂದೇಶ ಕಳುಹಿಸಿದ್ದರು. ಕೂಡಲೇ ಬೋಟ್ ಪತ್ತೆ ಹಚ್ಚಿ ಹಗ್ಗ ಬಿಗಿದು ಎಳೆದಿದ್ದೇವೆ ಎಂದು ಬ್ಲಾಕ್ ಬೆರ್ರಿ ಬೋಟ್ ಚಾಲಕ ಜಯರಾಮ್ ತಿಳಿಸಿದ್ದಾರೆ. ದೋಣಿಯಲ್ಲಿ ತುಂಬಿದ ನೀರನ್ನು ಸಮುದ್ರಕ್ಕೆ ಪಂಪ್ ಮಾಡಲಾಯಿತು. ಬೋಟ್ ಸುರಕ್ಷಿತವಾಗಿ ದಡ ತಲುಪಿದ್ದು, ಕಾರ್ಮಿಕರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಅಧಿಕಾರಿ ನಿಶ್ಚಲಕುಮಾರ್ ತಿಳಿಸಿದ್ದಾರೆ.
Discussion about this post