ಇತ್ತೀಚಿಗೆ ಬಿಡುಗಡೆಗೊಂಡ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವರನ್ನು ಕೈ ಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನದ ಹೊಗೆ ಎದ್ದಿದೆ. ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ಈಗಾಗಲೇ ಬಂಡಾಯವೆದ್ದಿರುವ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಅಲ್ಲದೆ ಡಿವಿ ಸದಾನಂದ ಗೌಡರು ಕೂಡ ಪಕ್ಷದ ವಿರುದ್ಧ ಬೇಸರ ಹೊರ ಹಾಕಿದ್ದು, ಟಿಕೆಟ್ ಕೊಡ್ತೇವೆ ಎಂದು ಹೇಳಿದ್ದರು ಆದರೆ ಕೊನೆಗೆ ಕೈ ಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಸಂಪರ್ಕಿಸಿರುವ ವಿಚಾರ ಒಪ್ಪಿಕೊಂಡ ಡಿವಿ ಸದಾನಂದಗೌಡರು ನನ್ನನ್ನು ಬೇರೆ ಬೇರೆಯವರು ಬಂದು ಸಂಪರ್ಕ ಮಾಡುತ್ತಿದ್ದಾರೆ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರು ಒಬ್ಬರು ಬಂದಿದ್ದರು. ಬಂದು ಸಾಂತ್ವನ ಮಾಡಿರುವುದಂತೂ ನಿಜ. ಇನ್ನೂ ಬೇರೆ ಬೇರೆ ಸಂಗತಿಗಳು ನಡೆಯುತ್ತಿವೆ ಎಂದು ಡಿವಿ ಸದಾನಂದ ಗೌಡ ತಿಳಿಸಿದರು. ಮುಂದಿನ ನಿರ್ಧಾರ ನನ್ನ ಕುಟುಂಬಸ್ಥರ ಜೊತೆ ಚರ್ಚಿಸಿ, ಕೆಲವೊಂದು ಮನದಾಳದ ವಿಚಾರವನ್ನು ಹೇಳಿಕೊಳ್ಳಬೇಕಿದೆ ಅದಕ್ಕಾಗಿ ನಾಳೆ ಸುದ್ದಿಗೋಷ್ಠಿ ಕರೆಯುತ್ತೇನೆ. ಯಾವ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ನಾಳೆ ಹೇಳುತ್ತೇನೆ ಎಂದು ತಿಳಿಸಿದರು.
Discussion about this post